ಅಟಕಾಮ
	
ಈ ಮರುಭೂಮಿ ಚಿಲಿ ದೇಶದ ಪಶ್ಚಿಮ ಭಾಗದಲ್ಲಿ 300 ದ. ಅ.ದಿಂದ ಉತ್ತರಕ್ಕೆ ಸುಮಾರು 600 ಮೈ.ಗಳವರೆಗೆ ಹಬ್ಬಿದೆ. ಇಲ್ಲಿಯ ನಿವಾಸಿಗಳು ಅಮೆರಿಕನ್ ಇಂಡಿಯನ್ನರು ಮತ್ತು ಯುರೋಪಿಯನ್ನರು. ಯುರೋಪಿಯನ್ನರು ಇಲ್ಲಿ ಸಿಕ್ಕುವ ಪೆಟ್ಲುಪ್ಪು (ಯವಕ್ಷಾರ) ಮತ್ತು ಖನಿಜ ಸಂಪತ್ತಿನ ಆಕರ್ಷಿತರಾಗಿ ಇಲ್ಲಿ ಬಂದು ನೆಲಸಿದರು. ಮೊದಲು ಇದರ ಒಡೆತನಕ್ಕಾಗಿ ಚಿಲಿ, ಬೊಲಿವಿಯ ಮತ್ತು ಪೆರು ದೇಶಗಳ ನಡುವೆ ಯುದ್ಧಗಳಾದುವು. ಕೊನೆಗೆ ಚಿಲಿ ದೇಶ ಜಯಶಾಲಿಯಾಯಿತು. ಇದಕ್ಕೆ ಇಕ್ಕಟ್ಟಾದ ಸಮುದ್ರತೀರವಿದೆ. ಉಳಿದ ಭಾಗ ಎತ್ತರವಾದ ಪ್ರಸ್ಥಭೂಮಿ. ಅನೇಕ ವರ್ಷಗಳವರೆಗೆ ಮಳೆಯೇ ಆಗುವುದಿಲ್ಲ ; ಐದು ಆರು ವರ್ಷಗಳಿಗೊಮ್ಮೆ ಮಳೆಯಾಗುತ್ತದೆ. ಅದೂ ಒಂದು ಅಂಗುಲದಷ್ಟು ಮಾತ್ರ. ಆದ್ದರಿಂದ ಭೂಮಿ ಪೂರ್ತ ಶುಷ್ಕವಾಗಿದೆ. ಕೇವಲ ಒಂದು ನದಿ ಹರಿಯುತ್ತದೆ. ಇಕ್ವಿಕ್ ಮತ್ತು ಆಂಟೊಫಗಸ್ಟ ಇಲ್ಲಿಯ ಬಂದರುಗಳು. ಇಲ್ಲಿಂದ ಪೆಟ್ಲುಪ್ಪು ಮತ್ತು ಬೊಲಿವಿಯದ ಖನಿಜ ರಪ್ತಾಗುತ್ತವೆ. ಪೆಟ್ಲುಪ್ಪು ಯುರೋಪು ಅಮೆರಿಕದ ಸಂಯುಕ್ತಸಂಸ್ಥಾನಗಳಿಗೆ ರಫ್ತಾಗುತ್ತದೆ. ನೈಟ್ರೇಟ್ ತೆಗೆಯುವ ಯಾಂತ್ರಿಕ ವಿಧಾನಗವನ್ನು ಕಂಡುಹಿಡಿದಾಗಿನಿಂದ ಇದರ ಪ್ರಾಮುಖ್ಯ ಕಡಿಮೆಯಾಗಿದೆ ; ಈ ವಿಧಾನದಿಂದ ಅಯೊಡಿನ್ ಎಂಬ ಉಪವಸ್ತು ಸಿಗುತ್ತದೆ. ಅಮೆರಿಕದ ಸಂಯುಕ್ತಸಂಸ್ಥಾನದ 30% ಆವಶ್ಯಕತೆಯನ್ನು ಚಿಲಿ ಒದಗಿಸುತ್ತದೆ. ಇದಲ್ಲದೆ ಅದರ ಮಧ್ಯಭಾಗಗಳಲ್ಲಿ ಬೆಳ್ಳಿ ಮತ್ತು ತಾಮ್ರ ದೊರೆಯುತ್ತವೆ ; ಆದರೆ ಅವು ಈಗ ಕಡಿಮೆಯಾಗಿವೆ. ಇಲ್ಲಿಯ ಇಂಡಿಯನ್ ಜನರು ಮೊದಲು ಉತ್ತರದಿಂದ ದಕ್ಷಿಣಕ್ಕೆ ರಸ್ತೆ ನಿರ್ಮಾಣ ಮಾಡಿದ್ದರು. ಸ್ಪೇನಿನ ಜನರು ಪೂರ್ವ-ಪಶ್ಚಿಮ ಮಾರ್ಗವಾಗಿ ರಸ್ತೆ ನಿರ್ಮಿಸಿದ್ದಾರೆ. ತೀರಪ್ರದೇಶದಲ್ಲಿ ಸ್ವಲ್ಪ ಮಳೆ ಬೀಳುತ್ತದೆ. ಹವಾಮಾನ ಹಿತಕರ. ಓಯಸಿಸ್‍ಗಳಲ್ಲಿ ಕುರಿ, ಲಾಮಾ ಮತ್ತು ಮೇಕೆಗಳನ್ನು ಸಾಕುತ್ತಾರೆ. ಆಲ್ಫಾಲ್ಫಾ ಹುಲ್ಲು ಬೆಳೆಯುತ್ತಾರೆ. ಇವರ ಆಹಾರ ಮೆಕ್ಕೆಜೋಳ, ಕುರಿಯ ಮಾಂಸ, ಹಾಲು, ಬೆಣ್ಣೆ, ಗಿಣ್ಣು ಮುಂತಾದವು. ಹೆಣ್ಣುಮಕ್ಕಳು ಉಣ್ಣೆಬಟ್ಟೆ ಮತ್ತು ಮಣ್ಣಿನ ಮಡಕೆಗಳನ್ನು ತಯಾರಿಸುತ್ತಾರೆ.						
(ಬಿ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ